ಆಂಪೇರ್, ಆಂದ್ರೆಮಾರಿ
(1775-1836). ಫ್ರೆಂಚ್ ಭೌತವಿಜ್ಞಾನಿ. ಲಿಯಾನ್ ಪಟ್ಟಣದ ಬಳಿ ಪಾಲೇಮಿಯೇ ಎಂಬಲ್ಲಿ 1775ರ ಜನವರಿ 22ರಂದು ಜನಿಸಿದ. ಓದುವುದಕ್ಕೆ ಬರುವ ಮೊದಲೇ ಕಲ್ಲುಚೂರುಗಳನ್ನಿಟ್ಟುಕೊಂಡು ತೊಡಕಾದ ಲೆಕ್ಕಗಳನ್ನು ಮಾಡುತ್ತಿದ್ದನಂತೆ. ತಂದೆಯಿಂದ ಲಕೀನ ಭಾಷೆಯನ್ನು ಕಲಿತು ಅದರ ಮೂಲಕ ಅಯ್ಲರ್ ಮತ್ತು ಬರ್ನೌಲಿ ಎಂಬುವರ ಶಾಸ್ತ್ರ ಲೇಖನಗಳನ್ನೋದಿ ಹದಿನೆಂಟು ವರ್ಷ ವಯಸ್ಸಾಗುವ ವೇಳೆಗೆ ಗಣಿತಶಾಸ್ತ್ರವಲ್ಲದೆ ಚರಿತ್ರೆ, ತತ್ತ್ವಶಾಸ್ತ್ರ, ಜೀವಶಾಸ್ತ್ರ ಮೊದಲಾದವುಗಳಲ್ಲೂ ಪ್ರವೀಣನಾದ. ಲಿಯಾನ್‍ನಲ್ಲಿ ಗಣಿತ, ರಸಾಯನಶಾಸ್ತ್ರ ಮತ್ತು ಭಾಷೆಗಳನ್ನು ಬೋಧಿಸಿ ಹಣ ಸಂಪಾದಿಸುತ್ತಿದ್ದ (1796). 1801ರಲ್ಲಿ ಬೂರ್ಗ್ ಎಂಬಲ್ಲಿ ಭೌತ ಮತ್ತು ರಸಾಯನಶಾಸ್ತ್ರ ಪ್ರಾಧ್ಯಾಪಕನಾಗಿ, 1804ರಲ್ಲಿ ಲಿಯಾನ್‍ನಲ್ಲಿ ಗಣಿತಶಾಸ್ತ್ರ ಪ್ರಾಧ್ಯಾಪಕನಾದ. 1809ರಲ್ಲಿ ಪ್ಯಾರಿಸ್ ನಗರದಲ್ಲಿ ಗಣಿತಶಾಸ್ತ್ರ ಪ್ರಾಧ್ಯಾಪಕನಾಗಿ ಎಕೋಲ್ ಪಾಲಿಟೆಕ್ನಿಕ್ ಎಂಬ ಪ್ರಸಿದ್ಧ ಪಾಠಶಾಲೆಯನ್ನು ಸೇರಿದ. 1814ರಲ್ಲಿ ಇನ್‍ಸ್ಟಿಟ್ಯೂಟ್ ಎಂಬ ವಿದ್ವತ್ಸಭೆಯ ಸದಸ್ಯನಾದನು. 1799ರಲ್ಲಿ ಈತ ಜೂಲಿಕಾರನ್ ಎಂಬುವಳನ್ನು ಮದುವೆಯಾದ. ಆದರೆ 1804ರಲ್ಲಿ ಆಕೆ ಸತ್ತುಹೋದಳು. ಭೌತಶಾಸ್ತ್ರದಲ್ಲಿ ಈತನ ಮುಖ್ಯ ಪಾತ್ರ ವಿದ್ಯುತ್ಕಾಂತಶಾಸ್ತ್ರವನ್ನು ನಿರ್ಮಿಸಿ ಬೆಳೆಸಿದುದೇ ಆಗಿದೆ. ವಿದ್ಯುತ್ಪ್ರವಾಹ ಅಯಸ್ಕಾಂತದ ಮೇಲೆ ಬಲಪ್ರಯೋಗ ನಡೆಸುವುದೆಂಬುದನ್ನು 1820 ರಲ್ಲಿ ಅಸ್ರ್ಟೆಡ್ ಕಂಡುಹಿಡಿದ ಸಮಾಚಾರವನ್ನು ಕೇಳಿದೊಡನೆ ಆಂಪೇರ್ ಅದನ್ನು ಗಣಿತಶಾಸ್ತ್ರ ರೀತ್ಯಾ ಕೂಲಂಕಷವಾಗಿ ಪರಿಶೀಲಿಸಿ ಒಂದು ವಿದ್ಯುತ್ಪ್ರವಾಹ ಮತ್ತೊಂದರ ಮೇಲೆ ಬಲಪ್ರಯೋಗ ಮಾಡುವಾಗ ಅನುಸರಿಸುವ ನಿಯಮಗಳನ್ನು ಕಂಡುಹಿಡಿದು ವಿದ್ಯುತ್ಕಾಂತಶಾಸ್ತ್ರದ ಆರಂಭ ಕರ್ತನಾದ. ವಿದ್ಯುತ್ಪ್ರವಾಹದ ಬಳಕೆಯ ಏಕಮಾನಕ್ಕೆ ಈತನ ಹೆಸರನ್ನಿಟ್ಟಿರುವುದು ಈ ಕಾರಣದಿಂದಲೇ. ಇವನು ಮಾರಸೇಯ ಪಟ್ಟಣದಲ್ಲಿ 1836ರ ಜೂನ್ 10ರಂದು ಕಾಲವಾದ.							
(ಟಿ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ